ಸಂಶೋಧಕರು
ಕುಂದಣಗಾರ್ ಕೆ.ಜಿ., 1895-1965

ಕಲ್ಲಪ್ಪ ಗಿರಿಯಪ್ಪ ಕುಂದಣಗಾರ್ ಅವರು, ಕನ್ನಡ, ಪಾಲಿ, ಮರಾಠಿ, ಅರ್ಧಮಾಗಧಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ, ಹಿರಿಯ ವಿದ್ವಾಂಸರು. ಅವರು ಗ್ರಂಥಸಂಪಾದನೆ, ವಾಸ್ತುಶಿಲ್ಪ, ಜೈನಧರ್ಮ ಮುಂತಾದ ವಿಷಯಗಳಲ್ಲಿ ವಿಶೇಷ ಆಸಕ್ತಿ ಇದ್ದವರು. ಕುಂದಣಗಾರ್ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೌಜಲಗಿ ಎಂಬ ಹಳ್ಳಿಯಲ್ಲಿ, ಹುಟ್ಟಿದರು. ಸಾಕಷ್ಟು ಕಷ್ಟಗಳನ್ನು ಅನುಭವಿಸಿ, 1919 ರಲ್ಲಿ ಬಿ.ಎ. ಪದವಿ ಪಡೆದು, ಅನಂತರ ಗೋಕಾಕದ ಶಾಲೆಯೊಂದರಲ್ಲಿ ಅಧ್ಯಾಪಕರಾಗಿ ಕೆಲಸ ಮಾಡತೊಡಗಿದರು. ಸಂಶೋಧಕನಾಗುವ ಉದ್ದೇಶದಿಂದ, ಹಳಗನ್ನಡ, ಸಂಸ್ಕೃತ ಮತ್ತು ಶಾಸನಗಳ ಗಂಭೀರ ಅಧ್ಯಯನವನ್ನು ಪ್ರಾರಂಭಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1925-27 ರ ಅವಧಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ ನಂತರ, ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ತೆರಳಿದರು. 1948 ರಲ್ಲಿ ನಿವೃತ್ತರಾಗುವ ತನಕ, ಅವರು ಅಲ್ಲಿಯೇ ಅಧ್ಯಯನ ಮತ್ತು ಅಧ್ಯಾಪನಗಳಲ್ಲಿ ನಿರತರಾಗಿದ್ದರು.

ಕುಂದಣಗಾರರ ಸಾಧನೆಯು ಐದು ದಶಕಗಳಲ್ಲಿ ಹರಡಿಕೊಂಡಿದೆ ಮತ್ತು ಸಾಹಿತ್ಯಚರಿತ್ರೆ, ಛಂದಸ್ಸು, ಸಾಹಿತ್ಯ ರೂಪಗಳು, ಧರ್ಮ, ಕಲೆ ಮುಂತಾದ ಅನೇಕ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಇವಲ್ಲದೆ, ಅವರು ಸರಸ್ವತಿ(1930) ಎಂಬ ಕಾದಂಬರಿಯನ್ನೂ ಮಹಾದೇವಿಯಕ್ಕ(1930) ಎಂಬ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಈ ಕಾದಂಬರಿಯ ಕರ್ತೃತ್ವವನ್ನು ಕುರಿತು ಎಂ.ಜಿ.ಬಿರಾದಾರ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಕುಂದಣಗಾರರು ಭರತೇಶ ವೈಭವ, ನಾಗಾನಂದ ನಾಟಕ ಮತ್ತು ರತ್ನಾವಳೀ ನಾಟಕಗಳನ್ನು ಕನ್ನಡದಿಂದ ಮರಾಠಿಗೆ ಅನುವಾದಿಸಿದ್ದಾರೆ. ಗ್ರಂಥಸಂಪಾದನೆಯಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿದ್ದ ಕುಂದಣಗಾರರು ಕೆಳಕಾಣಿಸಿರುವ ಪುಸ್ತಕಗಳನ್ನು ಸಂಪಾದಿಸಿದ್ದಾರೆ.

  1. ನೇಮಿಚಂದ್ರನ ಲೀಲಾವತೀ ಪ್ರಬಂಧ, 1936.(ಭಾಗಶಃ)
  2. ಜಿನಸೇನನಾಚಾರ್ಯರ ಪೂರ್ವಪುರಾಣ, 1943.
  3. ಪಂಪನ ಆದಿಪುರಾಣಂ, 1953. (ಎ.ಪಿ.ಚೌಗುಲೆಯವರೊಂದಿಗೆ)
  4. ಕುಮುದೇಂದು ಕವಿಯ ಕುಮುದೇಂದು ರಾಮಾಯಣ, 1936.
  5. ಕಲ್ಯಾಣಕೀರ್ತಿಯ ಚಿನ್ಮಯ ಚಿಂತಾಮಣಿ, (ಎ.ಎನ್. ಉಪಾಧ್ಯೆಯವರೊಂದಿಗೆ)
  6. ನೇಮಣ್ಣನ ಜ್ಞಾನಭಾಸ್ಕರ ಚರಿತೆ, (ಎ.ಎನ್. ಉಪಾಧ್ಯೆಯವರೊಂದಿಗೆ)

ಕುಂದಣಗಾರರು, ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯವನ್ನು ಕುರಿತು, ‘Some Notes on Sri Mahalakshmi Temple’ ಎಂಬ ಅಧಿಕೃತವಾದ ಪುಸ್ತಕವನ್ನು ಬರೆದಿದ್ದಾರೆ. ಆ ಪ್ರದೇಶದಲ್ಲಿ ದೊರೆಯುತ್ತಿದ್ದ ಶಾಸನಗಳ ಸಂಕಲನವು, “Inscriptions in North Karnataka and the Kolhapur State’ ಎಂಬ ತಲೆಬರೆಹದಲ್ಲಿ 1939 ರಲ್ಲಿ ಪ್ರಕಟವಾಯಿತು. ಕೊಲ್ಲಾಪುರದ ಸಮೀಪದಲ್ಲಿರುವ ಬ್ರಹ್ಮಪುರಿ ಎಂಬ ಜಾಗದಲ್ಲಿ ಅವರು ನಡೆಸಿದ ಉತ್ಖನನಗಳು ಮುಖ್ಯವಾದವು. ಅವರು ಬರೆದಿರುವ ಲೇಖನಗಳ ಆಸಕ್ತಿ ಮತ್ತು ವ್ಯಾಪ್ತಿಗಳು Numismatics of Ancient Karnataka’ ‘Art during early Chalukya Period’ ಮುಂತಾದ ಶೀರ್ಷಿಕೆಗಳಿಂದಲೇ ತಿಳಿಯುತ್ತದೆ. ಕನ್ನಡದ ಹಿರಿಯ ಕವಿಯಾದ ಹರಿಹರನ ಬಗೆಗಿನ ವಿಮರ್ಶಾತ್ಮಕ ಬರೆಹಗಳ ಸಂಕಲನವಾದ ಹರಿಹರದೇವ ವಿದ್ವಾಂಸರ ಮೆಚ್ಚಿಗೆಗೆ ಪಾತ್ರವಾಗಿದೆ. ಎಂ.ಜಿ. ಬಿರಾದಾರ ಅವರು, ಕುಂದಣಗಾರರ ಒಂದು ನೂರು ಲೇಖನಗಳ ಸಂಕಲನವನ್ನು ಹೊರತಂದಿದ್ದಾರೆ. ಕುಂದಣಗಾರರು ಹಲವಾರು ಸಾಂಸ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಅವರು ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಪ್ರಕಟಿಸಿರುವ ನಿಘಂಟುಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು. ಕೆಲ ಕಾಲ, ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ವಾಗ್ಭೂಷಣ ಮತ್ತು ಜಿನಸಮಯ ಪತ್ರಿಕೆಗಳ ಸಂಪಾದಕರಾಗಿದ್ದರು.

ಕೆ.ಜಿ. ಕುಂದಣಗಾರರು, ಧಾರವಾಡ ಜಿಲ್ಲೆಯ ಗದಗಿನಲ್ಲಿ 1961 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅದೇ ವರ್ಷ, ಅವರಿಗೆ ಕುಂದಣ ಎಂಬ ಅಭಿನಂದನ ಗ್ರಂಥವನ್ನು ಕೊಡಲಾಯಿತು.

ಮುಖಪುಟ / ಸಂಶೋಧಕರು